ಶುಕ್ರವಾರ, ನವೆಂಬರ್ 30, 2018

ಕಾಂಡ್ವಿ

ಗುಜರಾತಿ ಸ್ಪೆಷಲ್ ಕಾಂಡ್ವಿ

ಶ್ರಾವಣ ಗೌರಿ ನೋಡಲು ಒಂದು ಗುಜರಾತಿ ಕುಟುಂಬಕ್ಕೆ ಕರೆದಿದ್ದರು. ಶ್ರಾವಣ ಮಾಸದಲ್ಲಿ ಒಂಬತ್ತು ದಿನಗಳ ಕಾಲ ಗೌರಿಯ ಮೂರ್ತಿಯನ್ನು ಇಟ್ಟು ಪೂಜಿಸಿ ನಂತರ ವಿಸರ್ಜನೆ ಮಾಡುತ್ತಾರೆ ಅಂದರೆ ನೀರಿಗೆ ಬಿಡುವ ಪದ್ಧತಿ ಇದೆ. ಅಲ್ಲಿ ಕಾಫಿಯ ಜೊತೆಗೆ ಅವರ ಕೆಲವು ಪ್ರಸಿದ್ಧ ತಿಂಡಿಗಳನ್ನು ಇಟ್ಟಿದ್ದರು. ಅದರಲ್ಲಿ ಈ ಕಾಂಡ್ವಿ ಎನ್ನುವ ತಿಂಡಿ ನನ್ನನ್ನು ಬಹಳವೇ ಆಕರ್ಷಿಸಿತು. ಈ ತಿನಿಸು ಮೋದಿಗೂ ಬಹಳ ಪ್ರಿಯವಂತೆ..

ನೋಡಲು ಬಹಳವೇ ಸುಂದರವಾಗಿತ್ತು. ತಿಂದು ನೋಡಿದಾಗಲೂ ರುಚಿ ಹಿಡಿಸಿತು. ಅವರ ಬಳಿ ಮಾಡುವ ವಿಧಾನ ಕೇಳಿಯೂ ಆಯಿತು. ಇದರ ಜೊತೆಗೆ ಗೂಗಲ್ ನ ಕೃಪೆಯೊಂದಿಗೆ ಮನೆಯಲ್ಲಿ ಈ ಕಾಂಡ್ವಿಯನ್ನು ತಯಾರಿಸಿದೆ. ನೋಡಲು ಹಾಗೆಯೇ ಇತ್ತು ಜೊತೆಗೆ ರುಚಿಯೂ ಸಹ ಇತ್ತು.

ಬೇಕಾಗುವ ಸಾಮಗ್ರಿ :
ಕಡಲೆಹಿಟ್ಟು : 3/4 ಕಪ್
ನೀರು : 1 ಕಪ್
ಮೊಸರು : 3/4 ಕಪ್
ಇಂಗು : 1/4 ಚಮಚ
ಅರಿಸಿಣ : 1 ಚಿಟಿಕೆ
ಶುಂಠಿ & ಹಸಿಮೆಣಸಿನಕಾಯಿ ಪೇಸ್ಟ್ : 1 ಚಮಚ
ಉಪ್ಪು : ರುಚಿಗೆ

ಒಗ್ಗರಣೆಗೆ :
ಸಾಸಿವೆ : 1 ಚಮಚ
ಎಳ್ಳು : 1 ಚಮಚ
ಇಂಗು : 1 ಚಿಟಿಕೆ
ಒಣಮೆಣಸಿನಕಾಯಿ : 1
ಎಣ್ಣೆ : 2 ಚಮಚ

ಅಲಂಕಾರಕ್ಕೆ :
ಹೆಚ್ಚಿದ ಕೊತ್ತಂಬರಿ ಸೊಪ್ಪು : ಸ್ವಲ್ಪ
ಕಾಯಿತುರಿ : ಸ್ವಲ್ಪ

ಮಾಡುವ ವಿಧಾನ :
ಒಂದು ಪ್ಯಾನ್ ಗೆ ಕಡಲೇಹಿಟ್ಟು, ನೀರು, ಮೊಸರು, ಉಪ್ಪು, ಶುಂಠಿ & ಹಸಿಮೆಣಸಿನಕಾಯಿ ಪೇಸ್ಟ್, ಇಂಗು, ಅರಿಸಿಣ ಎಲ್ಲವನ್ನು ಗಂಟಿಲ್ಲದಂತೆ ಸರಿಯಾಗಿ ಕಲಸಿಕೊಳ್ಳಬೇಕು.
ನಂತರ ಒಲೆಯ ಮೇಲಿಟ್ಟು ತಳಬಿಡುವವರೆಗೆ ಕೈಯಾಡಿಸಬೇಕು.
ಎಷ್ಟು ಬಟ್ಟಲು ಅಗತ್ಯವೋ ಅಷ್ಟು ಬಟ್ಟಲಿನ ಮೇಲೆ ಎಣ್ಣೆ ಸವರಿಟ್ಟುಕೊಳ್ಳಬೇಕು. ಒಲೆಯಿಂದ ಇಳಿಸಿದ ತಕ್ಷಣವೇ ಬಟ್ಟಲಿನ ಮೇಲೆ ಹಪ್ಪಳದ ರೀತಿ ಚಮಚದ ಸಹಾಯದಿಂದ ಹರವಬೇಕು.
ಚಾಕುವಿನಿಂದ ಉದ್ದಕ್ಕೆ ಕತ್ತರಿಸಬೇಕು. 5 ನಿಮಿಷ ಬಿಟ್ಟು ಸುರುಳಿ ಮಾಡುತ್ತಾ ಬಟ್ಟಲಿನಿಂದ ಎತ್ತಬೇಕು.
ಮೇಲೆ ಹೇಳಿದ ಸಾಮಗ್ರಿಗಳಿಂದ ಈ ರೋಲ್ ಗಳಿಗೆ ಒಗ್ಗರಣೆ ಮಾಡಬೇಕು. ನಂತರ ಮೇಲಿನ ಸಾಮಗ್ರಿಗಳಿಂದ ಅಲಂಕರಿಸಬೇಕು.

ಗುಜರಾತಿ ಸ್ಪೆಷಲ್ ಕಾಂಡ್ವಿ ಸವಿಯಲು ಸಿದ್ಧ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ