ಸೋಮವಾರ, ಜುಲೈ 12, 2021

ಮುದ್ದೆ ಕಡಬು (ಕಾಯಿ ಕಡಬು)


ತೊಂಡೆಕಾಯಿ ಥೀಮ್ ನಲ್ಲಿ ಟಾಪ್ ಸ್ಥಾನ ಪಡೆದ ಖುಷಿಗೆ ನಮ್ಮ ಸಾಂಪ್ರದಾಯಿಕ ಸಿಹಿಯೊಂದಿಗೆ ಬಂದಿದ್ದೇನೆ. ಅಡುಗೆ ಅರಮನೆಯ ಅಡ್ಮಿನ್ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಹಾಗೂ ಪ್ರೋತ್ಸಾಹಿಸಿದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಧನ್ಯವಾದಗಳು.

ಸಾಂಪ್ರದಾಯಿಕ ಸಿಹಿ ತಿಂಡಿ - ನಮ್ಮ ಮಲೆನಾಡಿನಲ್ಲಿ ಬಹಳ ಪ್ರಸಿದ್ಧವಾದ ಕಡಬು ಇದು. ಅಕ್ಕಿ, ಕಾಯಿ ಮತ್ತು ಬೆಲ್ಲದಿಂದ ಬಗೆ ಬಗೆಯ ತಿಂಡಿ ತಯಾರಿಸುವುದು ನಮ್ಮಲ್ಲಿಯ ವಿಶೇಷ. ಕೆಲವು ಹಬ್ಬದಲ್ಲಿಯೂ ದೇವರ ನೈವೇದ್ಯಕ್ಕೆ ಕಡಬು ತಯಾರಿಸುವ ಸಂಪ್ರದಾಯವಿದೆ.

ಬೇಕಾಗುವ ಸಾಮಗ್ರಿ :
ಅಕ್ಕಿ - 1 ಕಪ್
ಬೆಲ್ಲ - 1/4 ಕಪ್ + 1/4 ಕಪ್
ಏಲಕ್ಕಿ - 2
ಕಾಯಿತುರಿ - 1 ಕಪ್
ಉಪ್ಪು - 1/2 ಚಮಚ

ಮಾಡುವ ವಿಧಾನ :
ಅಕ್ಕಿಯನ್ನು ಕನಿಷ್ಠ 6 ಗಂಟೆ ನೆನೆಸಿ (ಜಾಸ್ತಿ ನೆನಸಬಹುದು) ಚೆನ್ನಾಗಿ ತೊಳೆದು ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ರುಬ್ಬಿದ ಮಿಶ್ರಣಕ್ಕೆ ನೀರು ಸೇರಿಸಿ ದೋಸೆ ಹಿಟ್ಟಿಗಿಂತಲೂ ತೆಳ್ಳಗೆ ಕರಡಿಕೊಳ್ಳಬೇಕು.
ಈ ಮಿಶ್ರಣಕ್ಕೆ 1/4 ಕಪ್ ಬೆಲ್ಲ, ಉಪ್ಪು ಸೇರಿಸಿ ಸರಿಯಾಗಿ ಕೈಯಾಡಿಸಬೇಕು.
ಸಣ್ಣ ಉರಿಯಲ್ಲಿ ಹಿಟ್ಟನ್ನು ಕೈಯಾಡಿಸುತ್ತಾ ಉಂಡೆ ಕಟ್ಟುವ ಹದಕ್ಕೆ ತರಬೇಕು.
(ತಳ ಬಿಡುವವರೆಗೆ ಮಗಚುತ್ತಿರಬೇಕು)
ಇದನ್ನು ತಣ್ಣಗಾಗಲು ಬಿಡಬೇಕು.
ಅಲ್ಲಿಯವರೆಗೆ ಕಾಯಿತುರಿಗೆ ಬೆಲ್ಲ ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು.
ತಣ್ಣಗಾದ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ಅದರೊಳಗೆ ಕಾಯಿತುರಿಯ ಮಿಶ್ರಣ ಸೇರಿಸಿ ಉಂಡೆ ಮಾಡಬೇಕು.
ಈ ಉಂಡೆಯನ್ನು ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಬೇಕು. (ಇಡ್ಲಿ ಬೇಯಿಸಿದಂತೆಯೇ ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಉಗಿಯಲ್ಲಿ ಬೇಯಿಸಬೇಕು)
ತುಪ್ಪದ ಜೊತೆ ತಿನ್ನಲು ರುಚಿಯಾಗಿರುತ್ತದೆ.

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ