ಗುರುವಾರ, ಫೆಬ್ರವರಿ 16, 2023

ಮಟರ್ (ಹಸಿರು ಬಟಾಣಿ) ಪರೋಟಾ


ಬೇಕಾಗುವ ಸಾಮಗ್ರಿ : 
ಮಟರ್ - 1 ಕಪ್
ಬೆಳ್ಳುಳ್ಳಿ - 4/5 ಎಸಳು
ಈರುಳ್ಳಿ - 1 
ಅರಿಶಿಣ - 1/4 ಚಮಚ 
ಕೊತ್ತಂಬರಿ ಸೊಪ್ಪು - ಸ್ವಲ್ಪ 
ಕಡಲೆ ಹಿಟ್ಟು - 3 ದೊಡ್ಡ ಚಮಚ 
ಜೀರಿಗೆ - 1 ಚಮಚ 
ಎಣ್ಣೆ - 2 ಚಮಚ 
ಹಸಿ ಮೆಣಸಿನ ಕಾಯಿ - 2 
ಗರಂ ಮಸಾಲ - 1 ಚಮಚ 
ಗೋಧಿ ಹಿಟ್ಟು - 1 1/2 ಕಪ್ (ಸ್ವಲ್ಪ ಹೆಚ್ಚು ಕಡಿಮೆ ತೆಗೆದುಕೊಳ್ಳಬಹುದು)
ಎಣ್ಣೆ - 1 ಸೌಟು
ರವಾ - 2 ದೊಡ್ಡ ಚಮಚ 
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ರವಾ ಮತ್ತು ಗೋಧಿ ಹಿಟ್ಟನ್ನು ಉಪ್ಪು, ಎಣ್ಣೆ ಸೇರಿಸಿ ಕಲಸಬೇಕು.
ನಂತರ ಬೇಕಾದಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಬಿಡಬೇಕು.
ಒಂದು ಬಾಣಲೆಯಲ್ಲಿ ಕಡಲೆ ಹಿಟ್ಟನ್ನುಎಣ್ಣೆ, ತುಪ್ಪ ಏನೂ ಹಾಕದೇ ಹುರಿದು ಕೊಳ್ಳಬೇಕು. 
ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಮಟರ್ ನ್ನು ಹಸಿಯಾಗಿಯೇ (ಬೇಯಿಸುವ ಅಗತ್ಯವಿಲ್ಲ) ಮಿಕ್ಸಿ ಜಾರ್ ಗೆ ಹಾಕಿ ನೀರು ಸೇರಿಸದೇ ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. 
ಒಂದು ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ಮೇಲೆ ಜೀರಿಗೆ ಹಾಕಿ ಕೈಯಾಡಿಸಿ ನಂತರ ಹೆಚ್ಚಿದ ಹಸಿ ಮೆಣಸಿನ ಕಾಯಿ ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಹುರಿಯಬೇಕು.
ನಂತರ ಇದಕ್ಕೆ ರುಬ್ಬಿದ ಮಟರ್ ಮತ್ತು ಹುರಿದ ಕಡಲೆ ಹಿಟ್ಟು ಸೇರಿಸಬೇಕು.
ಅರಿಶಿಣ, ಗರಂ ಮಸಾಲ ಪೌಡರ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಬೇಕು.
ಒಲೆ ಆರಿಸಿ ತಣ್ಣಗಾಗಲು ಬಿಡಬೇಕು. ನಂತರ ಸಣ್ಣ ಸಣ್ಣ ಉಂಡೆ ಮಾಡಬೇಕು.
ಇದನ್ನು ಮೊದಲೇ ಕಲಸಿದ ಗೋಧಿ ಹಿಟ್ಟಿನ ಉಂಡೆಯ ಒಳಗೆ ಸೇರಿಸಿ ಲಟ್ಟಿಸಿ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಬೇಕು.

(ಹಸಿರು ಚಟ್ನಿ, ಕೆಂಪು ಚಟ್ನಿ ಅಥವಾ ಸಾಸ್ ಇದರ ಜೊತೆಗೆ ಒಳ್ಳೆಯ ಕಾಂಬಿನೇಷನ್)

ವೇದಾವತಿ ಭಟ್ಟ 
ಮುಂಬೈ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ