ಗುರುವಾರ, ಡಿಸೆಂಬರ್ 26, 2019

ಸಾಂಬಾರ ಅವಲಕ್ಕಿ

ಬೇಕಾಗುವ ಸಾಮಗ್ರಿ :
ತೆಳು ಅವಲಕ್ಕಿ- 3 ಹಿಡಿ ( ಒಬ್ಬರಿಗೆ ಒಂದು ಹಿಡಿ)
ಈರುಳ್ಳಿ - 1 ದೊಡ್ಡದು
ಟೊಮಾಟೊ - 1 
ಒಣ ಮೆಣಸಿನ ಕಾಯಿ - 2
ಹಸಿಮೆಣಸಿನಕಾಯಿ - 1
ಸಾಸಿವೆ - 1 ಚಮಚ
ಎಣ್ಣೆ - 3/4 ಚಮಚ
ಅರಿಸಿಣ - 1 ಚಿಟಿಕೆ
ಕೊತ್ತಂಬರಿ - 1/2 ಚಮಚ
ಕಾಯಿತುರಿ - 1 ಕಪ್
ಬೆಲ್ಲ - 2 ಚಮಚ

ಮಾಡುವ ವಿಧಾನ:
ಮೊದಲು ಈರುಳ್ಳಿ, ಹಸಿಮೆಣಸಿನಕಾಯಿ  ಮತ್ತು ಟೊಮಾಟೊವನ್ನು ಸಣ್ಣಗೆ ಹೆಚ್ಚಿ ಕೊಳ್ಳಬೇಕು.
ಕಾಯಿತುರಿದಿಟ್ಟು ಕೊಳ್ಳಬೇಕು.
ಬಾಣಲೆಗೆ ಎಣ್ಣೆ ಅರಿಸಿಣ ಹಾಕಿ ಸಾಸಿವೆ, ಒಣಮೆಣಸಿನಕಾಯಿ ಮತ್ತು ಕೊತ್ತಂಬರಿ ಹಾಕಿ ಹುರಿದು ಕಾಯಿತುರಿಗೆ ಸೇರಿಸಬೇಕು.
ಇದಕ್ಕೆ ಉಪ್ಪು ಮತ್ತು ಬೆಲ್ಲವನ್ನೂ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು.
ಮತ್ತೆ ಬಾಣಲೆಗೆ ಹೆಚ್ಚಿದ  ಹಸಿಮೆಣಸಿನಕಾಯಿ, ಈರುಳ್ಳಿ, ಟೊಮಾಟೊ ಸೇರಿಸಿ ಸ್ವಲ್ಪ ಬಾಡಿಸಿ ಕಾಯಿತುರಿಯೊಂದಿಗೆ ಮಿಕ್ಸ್ ಮಾಡಬೇಕು.
ಇದಕ್ಕೆ ಅವಲಕ್ಕಿಯನ್ನು ಸೇರಿಸಿ ಚೆನ್ನಾಗಿ ಕಲಸಿದರೆ ಸಾಂಬಾರ ಅವಲಕ್ಕಿ ಸಿದ್ಧವಾಯಿತು.

ಬೇಕಾದರೆ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು.

ಮಂಗಳವಾರ, ನವೆಂಬರ್ 26, 2019

ಕೊತ್ತಂಬರಿ ಸೊಪ್ಪಿನ ವಡಿ

ಬೇಕಾಗುವ ಸಾಮಗ್ರಿ :
ಕೊತ್ತಂಬರಿ ಸೊಪ್ಪು - 1 ಕಟ್ಟು
ಕಡಲೇಹಿಟ್ಟು - ಸುಮಾರು 2 ಕಪ್
ಜೀರಿಗೆ - 2 ಚಮಚ
ಹಸಿಮೆಣಸಿನಕಾಯಿ - 3/4
ಬೆಳ್ಳುಳ್ಳಿ - 10/15 ಎಸಳು

ಮಾಡುವ ವಿಧಾನ :

ಕೊತ್ತಂಬರಿ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು.

ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ಸೇರಿಸಬೇಕು.

ಬೆಳ್ಳುಳ್ಳಿಯ ಪೇಸ್ಟ್  ಮತ್ತು ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕಲಸಬೇಕು.

ಇದಕ್ಕೆ ಅಗತ್ಯವಿರುವಷ್ಟು ಕಡಲೆಹಿಟ್ಟನ್ನು ಸೇರಿಸಿ ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಸೇರಿಸಿ ಗಟ್ಟಿಯಾಗಿ ಕಲಸಿ ಕುಕ್ಕರ್ ಟ್ರೇ ನಲ್ಲಿ  ಇಟ್ಟು ಮೂರು ವಿಸಿಲ್ ಹಾಕಿಸಬೇಕು

ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ ಶಾಲೋ ಫ್ರೈ ಇಲ್ಲವೇ ಡೀಪ್ ಫ್ರೈ ಮಾಡಿದರೆ ಕೊತ್ತಂಬರಿ ವಡಾ ಸವಿಯಲು ಸಿದ್ಧ.


ಪಾವ್ ಬಾಜಿ

ಇದು ಮಹಾರಾಷ್ಟ್ರದ ಪ್ರಸಿದ್ಧ ತಿನಿಸು. ಬೆಳಗಿನ ಉಪಹಾರದಿಂದ ಹಿಡಿದು ಚಹಾದ ಜೊತೆಗೂ ಇದು ಇಲ್ಲಿ ಬಳಕೆಯಾಗುತ್ತದೆ.
ಬೇಕಾಗುವ ಸಾಮಗ್ರಿ :
ಬಟಾಟೆ - 1/2 ಕಪ್
ಗಜ್ಜರಿ - 1 ಕಪ್
ಈರುಳ್ಳಿ - 1
ಹಸಿಮೆಣಸಿನ ಕಾಯಿ - 2/3
ಟೊಮೆಟೋ - 1 ಕಪ್
ಹಸಿರು ಬಟಾಣಿ - 1/2 ಕಪ್
ಗರಂ ಮಸಾಲಾ ಪುಡಿ - 1 ಚಮಚ
ಪಾವ್ ಬಾಜಿ ಮಸಾಲಾ - 1 ಚಮಚ
ಅರಿಶಿಣ - 1 ಚಿಟಿಕೆ
ಉಪ್ಪು - ರುಚಿಗೆ
ಸಕ್ಕರೆ - 1 ಚಮಚ
ಮಾಡುವ ವಿಧಾನ :
ಟೊಮೆಟೋ, ಬಟಾಟೆ ಮತ್ತು ಗಜ್ಜರಿಯನ್ನು ಸಣ್ಣಗೆ ಹೆಚ್ಚಿ ಹಸಿರು ಬಟಾಣಿಯನ್ನು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಬೇಕು.
ಒಂದು ಬಾಣಲೆಗೆ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನ ಕಾಯಿಯನ್ನು ಸೇರಿಸಿ ಚೆನ್ನಾಗಿ ಬಾಡಿಸಬೇಕು.
ಇದಕ್ಕೆ ಗರಂಮಸಾಲಾ ಪುಡಿ, ಪಾವ್ ಬಾಜಿ ಮಸಾಲಾ, ಅರಿಶಿಣ ಪುಡಿ ಹಾಕಬೇಕು.
ನಂತರ ಬೇಯಿಸಿದ ತರಕಾರಿಯನ್ನು ಚೆನ್ನಾಗಿ ಸ್ಮಾಶ್ ಮಾಡಿ ಇದಕ್ಕೆ ಸೇರಿಸಿ ಚೆನ್ನಾಗಿ ಕೈಯಾಡಿಸಬೇಕು.
ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಕಬೇಕು. ಬೇಕಾದಲ್ಲಿ ಹುಳಿಯನ್ನು ಹಾಕಬಹುದು.
ವಿ.ಸೂ. - ಇದಕ್ಕೆ ಸರಿಹೊಂದುವ ಬೇರೆ  ತರಕಾರಿಯನ್ನು ಬಳಸಬಹುದು

ಬುಧವಾರ, ಅಕ್ಟೋಬರ್ 23, 2019

ಕೇಕ್

ಬೇಕಾಗುವ ಸಾಮಗ್ರಿ :
ಮಾರಿಗೋಲ್ಡ್ ಬಿಸ್ಕತ್ - 1 ಪ್ಯಾಕ್ ( 20 ರೂ ದ್ದು)
ಬರ್ಬನ್ ಕ್ರೀಂ ಬಿಸ್ಕತ್ - 1 ಪ್ಯಾಕ್ ( 20 ರೂ ದ್ದು)
ಹಾಲು - 1 1/4 ಕಪ್
ಸಕ್ಕರೆ - 1/2 ಕಪ್
ತುಪ್ಪ - 2 ಚಮಚ
ಇನೋ - 1 ಪ್ಯಾಕ್
ಕಲ್ಲುಪ್ಪು - 1/2 ಕೆ.ಜಿ.

ಮಾಡುವ ವಿಧಾನ :
ಮಿಕ್ಸಿ ಜಾರ್ ಗೆ ಬಿಸ್ಕತ್ ಗಳನ್ನು ಹಾಕಿ ನುಣ್ಣಗೆ ಪುಡಿ ಮಾಡಿ ಒಂದು ಬೌಲ್ ಗೆ ಹಾಕಬೇಕು.
ಸಕ್ಕರೆಯನ್ನು ಮಿಕ್ಸಿ ಮಾಡಿ ಸೇರಿಸಬೇಕು.
ಒಂದು ಪ್ಯಾಕ್ ಇನೋವನ್ನು ಒಡೆದು ಇದಕ್ಕೆ ಸೇರಿಸಬೇಕು.
ಇದನ್ನು ಸರಿಯಾಗಿ ಮಿಕ್ಸ್ ಮಾಡಬೇಕು.
ನಂತರ ಇದಕ್ಕೆ ಹಾಲು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಿಸಬೇಕು.
ಒಂದು ಟ್ರೇ (ಕುಕ್ಕರ್ ನಲ್ಲಿ ಇಡುವಂತದ್ದು) ತುಪ್ಪ ಹಾಕಿ ಮಿಶ್ರಣವನ್ನು ಹಾಕಿ ಕುಕ್ಕರ್ ನಲ್ಲಿ ಇಡಬೇಕು.
ಕುಕ್ಕರ್ ಗೆ ವಿಸಿಲ್ ಮತ್ತು ಗ್ಯಾಸ್ಕೆಟ್ ಹಾಕಬಾರದು. ಉಪ್ಪು ಹಾಕಬೇಕು.
ದೊಡ್ಡ ಉರಿಯಾದರೆ 20 ರಿಂದ 25 ನಿಮಿಷ ಬೇಯಿಸಬೇಕು.


ಸೋಮವಾರ, ಆಗಸ್ಟ್ 5, 2019

ಕಾಯಿ ಕಡಬು

ಬೇಕಾಗುವ ಸಾಮಗ್ರಿ :
ಕಾಯಿತುರಿ - 2 ಕಪ್ (ಒಂದು ಕಡಿ)
ಅಕ್ಕಿಹಿಟ್ಟು - 1 ಕಪ್
ಬೆಲ್ಲ - 1/2 ಕಪ್
ಏಲಕ್ಕಿ ಪುಡಿ - 1 ಚಿಟಿಕೆ
ಉಪ್ಪು - ಸ್ವಲ್ಪ
ನೀರು - 1 ಕಪ್ (ಸುಮಾರು)
ಎಳ್ಳು - 2 ಚಮಚ
ಗಸಗಸೆ - 2 ಚಮಚ

ಮಾಡುವ ವಿಧಾನ :
ಕಾಯಿತುರಿಗೆ ಬೆಲ್ಲ ಸೇರಿಸಿ ಕೈಯಾಡಿಸಬೇಕು.
ಕರಗಿದ ನಂತರ ಎಳ್ಳು ಮತ್ತು ಗಸಗಸೆ ಸೇರಿಸಿ ಕೈಯಾಡಿಸಿ ಎಳೆ ಪಾಕ ಮಾಡಿ ಪಕ್ಕಕ್ಕೆ ಇಡಬೇಕು.
1 ಲೋಟ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಕುದಿಸಬೇಕು. ಇದಕ್ಕೆ ಅಕ್ಕಿಹಿಟ್ಟು ಸೇರಿಸಿ ಕೈಯಾಡಿಸಬೇಕು.
ಕೆಳಗಿಳಿಸಿ ತಣ್ಣಗಾದ ಮೇಲೆ ಸರಿಯಾಗಿ ಮೆದ್ದು ಚಿಕ್ಕ ಉಂಡೆ ಮಾಡಿಕೊಳ್ಳಬೇಕು.
ರೊಟ್ಟಿಯ ತರಹ ಚಿಕ್ಕದಾಗಿ ಲಟ್ಟಿಸಿ ಕಾಯಿತುರಿಯ ಮಿಶ್ರಣ ಒಳಗೆ ಸೇರಿಸಿ ಕರಜಿಕಾಯಿಯ ಆಕಾರದಂತೆ ಚಮಚದಿಂದ ಕತ್ತರಿಸಬೇಕು.
ಉಗಿಯಲ್ಲಿ 10 - 15 ನಿಮಿಷ ಬೇಯಿಸಬೇಕು.

ಶನಿವಾರ, ಜುಲೈ 20, 2019

ರಾಗಿ ಮಣ್ಣಿ

ಬೇಕಾಗುವ ಸಾಮಗ್ರಿ :
ರಾಗಿ - 1 ಕಪ್
ಬೆಲ್ಲ - 1 ಕಪ್
ಏಲಕ್ಕಿ ಪುಡಿ - 1 ಚಿಟಿಕೆ
ಉಪ್ಪು - 1/4 ಚಮಚ
ತುಪ್ಪ - 2 ಚಮಚ

ಮಾಡುವ ವಿಧಾನ :
ರಾಗಿಯನ್ನು ನೀರಿನಲ್ಲಿ ರಾತ್ರಿಯೇ ನೆನೆಸಿಡಬೇಕು.
ಮರುದಿನ ಚೆನ್ನಾಗಿ ತೊಳೆದು ರುಬ್ಬಿ ಸೋಸಿ ಹಾಲನ್ನು ತೆಗೆದುಕೊಳ್ಳಬೇಕು.
ಇದಕ್ಕೆ ಉಪ್ಪು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಬೇಕು.
ಸುಮಾರು ಅರ್ಧಗಂಟೆಯ ನಂತರ ತಳಬಿಡಲು ಪ್ರಾರಂಭಿಸುತ್ತದೆ.
ಆಗ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಬೇಕಾದ ಆಕಾರದಲ್ಲಿ ಕಯ್ತರಿಸಬೇಕು.

ತುಪ್ಪ, ಹಾಲು, ಮೊಸರು ಯಾವುದರ ಜೊತೆಗಾದರೂ ಸವಿಯಬಹುದು.

ಗುರುವಾರ, ಜುಲೈ 4, 2019

ಪಾಲಕ ಸೊಪ್ಪಿನ ಬಜೆ

ಬೇಕಾಗುವ ಸಾಮಗ್ರಿ :
ಕಡಲೇ ಹಿಟ್ಟು - 1 ಕಪ್
ಜೀರಿಗೆ - ಚಮಚ
ಓಂಕಾಳು - 1/4 ಚಮಚ
ಪಾಲಕ ಸೊಪ್ಪು - 15 ಎಲೆ (ದೊಡ್ಡದು)
ಉಪ್ಪು - ರುಚಿಗೆ
ಕೊತ್ತಂಬರಿ ಸೊಪ್ಪು - 1 ಕಟ್ಟು
ಬೆಳ್ಳುಳ್ಳಿ - 8/10
ಹಸಿಮೆಣಸಿನ ಕಾಯಿ - 2/3

ಮಾಡುವ ವಿಧಾನ :
ಮೊದಲು ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಜೀರಿಗೆ, ಓಂಕಾಳು ಎಲ್ಲವನ್ನೂ ಮಿಕ್ಸಿ ಮಾಡಿಕೊಳ್ಳಬೇಕು.
ಒಂದು ಬೌಲ್ ಗೆ ಕಡಲೇ ಹಿಟ್ಟು, ಮಿಕ್ಸಿ ಮಾಡಿದ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಅಗತ್ಯವಿದ್ದಷ್ಟು ನೀರು ಸೇರಿಸಿ ದೋಸೆಹಿಟ್ಟಿನ ಹದಕ್ಕಿಂದ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳುಬೇಕು.
ಪಾಲಕ ಸೊಪ್ಪನ್ನು ತೊಳೆದು ದಂಟಿನಿಂದ ಬೇರ್ಪಡಿಸಿಟ್ಟುಕೊಳ್ಳಬೇಕು.
ಕಲಸಿದ ಮಿಶ್ರಣದಲ್ಲಿ ಸೊಪ್ಪನ್ನು ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು.

ಗ್ರೀನ್ ಚಟ್ನಿ ಮತ್ತು ಸಾಸ್ ನ ಜೊತೆಗೆ ಸವಿಯಬಹುದು.

ಶಿರಾ

ಶಿರಸಿ, ಸಿದ್ದಾಪುರದ ಅತ್ಯಂತ ಜನಪ್ರಿಯವಾದ ತಿನಿಸು. ಮನೆಗೆ ಹೇಳದೇ ಯಾರಾದರೂ ಅತಿಥಿಗಳು ಬಂದಾಗ ದಿಢೀರ್ ಅಂತ ತಯಾರಿಸಬಹುದಾದ ತಿಂಡಿ ಶಿರಾ. ಕೇಸರಿಭಾತ್ ಎಂದೂ ಕೆಲವೆಡೆ ಹೇಳುತ್ತಾರೆ.

ಬೇಕಾಗುವ ಸಾಮಗ್ರಿ :
ರವಾ - 1 ಕಪ್
ಸಕ್ಕರೆ - 1 1/4 ಕಪ್
ಬಾಳೆಹಣ್ಣು - 2
ಏಲಕ್ಕಿ ಪುಡಿ - 1 ಚಿಟಿಕೆ
ನೀರು - 3 ರಿಂದ 4 ಕಪ್
ತುಪ್ಪ - 3/4 ಕಪ್
ಒಣದ್ರಾಕ್ಷಿ - ಸ್ವಲ್ಪ
ಉಪ್ಪು - ರುಚಿಗೆ

ಮಾಡುವ ವಿಧಾನ :
ನೀರನ್ನು ಕುದಿಯಲು ಇಡಬೇಕು.
ಬಾಳೆಹಣ್ಣನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಬೇಕು.
ರವಾಕ್ಕೆ ತುಪ್ಪವನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು.
ನಂತರ ಬಿಸಿ ನೀರನ್ನು ಸೇರಿಸಿ ಕೈಯಾಡಿಸಬೇಕು.
ಹೆಚ್ಚದ ಬಾಳೆಹಣ್ಣು, ಒಣದ್ರಾಕ್ಷಿ, ಉಪ್ಪು,  ಸೇರಿಸಿ ಬೇಯಿಸಬೇಕು.
ನಂತರ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ತಳ ಬಿಡುವವರೆಗೆ ಕೈಯಾಡಿಸದರೆ ಶಿರಾ ಸಿದ್ಧವಾಯಿತು.

ಬಾಳೆಹಣ್ಣಿನ ಬನ್ಸ್

ಬೇಕಾಗುವ ಸಾಮಗ್ರಿ :
ಬಾಳೆಹಣ್ಣು - 3 (ಚೆನ್ನಾಗಿ ಕಳಿತದ್ದು)
ಸಕ್ಕರೆ - 5/6 ಚಮಚ
ಅಡಿಗೆ ಸೋಡಾ - 1 ಚಿಟಿಕೆ
ಗೋಧಿ ಹಿಟ್ಟು - ಅಗತ್ಯವಿದ್ದಷ್ಟು
ಮೊಸರು - 1 ಸೌಟು
ಉಪ್ಪು - 1/4 ಚಮಚ
ಎಣ್ಣೆ - ಕರಿಯಲು

ಮಾಡುವ ವಿಧಾನ :
ಮೊದಲು ಬಾಳೆಹಣ್ಣನ್ನು ಸುಲಿದು ಮಿಕ್ಸಿ ಮಾಡಿಕೊಳ್ಳಬೇಕು.
ನಂತರ ಇದಕ್ಕೆ ಸಕ್ಕರೆ, ಅಡಿಗೆ ಸೋಡಾ, ಮೊಸರು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು.
ನಂತರ ಇದಕ್ಕೆ ಅಗತ್ಯವಿದ್ದಷ್ಚು ಗೋಧಿ ಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ನಂತರ ಅತ್ರಾಸದಂತೆ ತಟ್ಟಿ  ಕಾದ ಎಣ್ಣೆಯಲ್ಲಿ ಕರಿಯಬೇಕು.

ಚಟ್ನಿ ಮತ್ತು ಸಾಂಬಾರ್ ಜೊತೆಗೆ ಸವಿದರೇ ರುಚಿ ಹೆಚ್ಚು.

ಬೆಣ್ಣೆ ಬಿಸ್ಕತ್

ದಿಢೀರ್ ಅಂತ ಮಾಡಬಹುದಾದ ತಿಂಡಿ. ಚಹಾದ ಜೊತೆಗಂತೂ ಬಹಳ ಒಳ್ಳೆಯ ಕಾಂಬಿನೇಷನ್. ಬಹಳ ಕಡಿಮೆ ಸಾಮಗ್ರಿಗಳನ್ನು ಬಳಸಿ ಸ್ವಲ್ಪವೇ ಸಮಯದಲ್ಲಿ ಮಾಡಬಹುದು.

ಬೇಕಾಗುವ ಸಾಮಗ್ರಿ :
ಕಾಯಿತುರಿ - ಪೂರ್ತಿ ಒಂದು ಕಾಯಿಯದ್ದು
ಸಕ್ಕರೆ - 1 ಕಪ್ ( ಸ್ವಲ್ಪ ಜಾಸ್ತಿ ಬಳಸಬಹುದು)
ಉಪ್ಪು - 1/2 ಚಮಚ
ಗೋಧಿ ಹಿಟ್ಟು - ಕಾಯಿತುರಿ ಮಿಶ್ರಣಕ್ಕೆ ಅಗತ್ಯವಿದ್ದಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ :
ಕಾಯಿತುರಿಗೆ ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಅರ್ಧ ಗಂಟೆಯ ಕಾಲ ಹಾಗೆಯೇ ಇಡಬೇಕು. ಸಕ್ಕರೆ ಪೂರ್ತಿಯಾಗಿ ಕರಗಿ ಇದು ನೀರೊಡೆಯುತ್ತದೆ.
ಇದಕ್ಕೆ ಅಗತ್ಯವಿದ್ದಷ್ಟು ಗೋಧಿ ಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ನಾದಿಕೊಂಡು ಕಲಸಿಕೊಳ್ಳುಬೇಕು.
ಕಲಸಿದ ಹಿಟ್ಟನ್ನು ಅರ್ಧ ಗಂಟೆ ಹಾಗೆಯೇ ಬಿಡಬೇಕು.
ಚೆನ್ನಾಗಿ ನಾದಿ ಸಣ್ಣ ಉಂಡೆ ಮಾಡಿ ಬಾಳೆ ಇಲ್ಲವೇ ಪ್ಲಾಸ್ಟಿಕ್ ಹಾಳೆಯ ಮೇಲೆ ಅತ್ರಾಸದಂತೆ ತಟ್ಟಿ ಎಣ್ಣೆಯಲ್ಲಿ ಕಲಿಯಬೇಕು.

ಭಾನುವಾರ, ಜೂನ್ 23, 2019

ಡ್ರೈ ಫ್ರೂಟ್ಸ್ ಅಂಡ್ ನಟ್ಸ್ ಲಾಡು

ಇದು ಆರೋಗ್ಯಕ್ಕೆ ಉತ್ತಮವಾದ ತಿನಿಸು. ಇದರಲ್ಲಿ ಸಿಹಿಗಾಗಿ ಸಕ್ಕರೆಯನ್ನು ಬಳಸಿಲ್ಲ. ಆದ್ದರಿಂದ ಸಕ್ಕರೆ ಖಾಯಿಲೆ ಇರುವವರೂ ತಿನ್ನಬಹುದು. ಬೆಳೆಯುವ ಮಕ್ಕಳಿಗಂತೂ ಅತ್ತುತ್ತಮವಾದ ಆಹಾರವಾಗಿದೆ.

ಬೇಕಾಗುವ ಸಾಮಗ್ರಿ :
ಖರ್ಜೂರ - 1/2  ಕೆ.ಜಿ.
ಬಾದಾಮಿ - 1 ಬೌಲ್
ಪಿಸ್ತಾ - 1/2 ಬೌಲ್
ಶೇಂಗಾ - 1/2 ಬೌಲ್
ಉತ್ತುತ್ತೆ - 5/6
ಒಣದ್ರಾಕ್ಷಿ - 1 ಬೌಲ್
ಗಸಗಸೆ - 2 ಚಮಚ
ಗೋಡಂಬಿ - 1 ಬೌಲ್

ಮಾಡುವ ವಿಧಾನ:
ಖರ್ಜೂರದ ಬೀಜ ಬಿಡಿಸಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು.
ಬಾದಾಮಿ, ಪಿಸ್ತಾ, ಗೋಡಂಬಿಯನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಬೇಕು.
ಉತ್ತುತ್ತೆಯನ್ನು ಬೀಜ ಬಿಡಿಸಿ ಸಣ್ಣಗೆ ಕತ್ತರಿಸಿಟ್ಟುಕೊಳ್ಳಬೇಕು.
ಶೇಂಗಾವನ್ನು ಹುರಿದು ಸಿಪ್ಪೆ ತೆಗೆದು ಚೂರುಗಳನ್ನಾಗಿ ಮಾಡಿಕೊಳ್ಳಬೇಕು.
ಗಸಗಸೆಯನ್ನು ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು.
ಒಂದು ಬಾಣಲೆಗೆ ಖರ್ಜೂರದ ಪೇಸ್ಟ್ ನ್ನು ಹಾಕಿ ಒಲೆಯ ಮೇಲಿಟ್ಟು ಕೈಯಾಡಿಸಿ ಅದಕ್ಕೆ ಬಾದಾಮಿ, ಗೋಡಂಬಿ, ಪಿಸ್ತಾ, ಶೇಂಗಾ, ಉತ್ತುತ್ತೆಯನ್ನು ಚೂರುಗಳನ್ನು ಸೇರಿಸಬೇಕು.
ಹುರಿದ ಗಸಗಸೆ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಕೈಯಾಡಿಸಿ ಒಲೆಯನ್ನು ಆರಿಸಿ ಕೆಳಗಿಳಿಸಬೇಕು.
ತಣ್ಣಗಾದ ನಂತರ ಉಂಡೆ ಕಟ್ಟಬೇಕು.