ಮಂಗಳವಾರ, ಜೂನ್ 20, 2023

ಮಾವಿನ ಹಣ್ಣಿನ ಶಿರಾ


ಬೇಕಾಗುವ ಸಾಮಗ್ರಿ : 
ಚಿರೋಟಿ ರವಾ - 1 ಕಪ್
ಸಕ್ಕರೆ - 1 ಕಪ್
ಬಿಸಿ ನೀರು - 2 ಕಪ್
ಏಲಕ್ಕಿ ಪುಡಿ - 1/4 ಚಮಚ 
ತುಪ್ಪ - 3/4 ಕಪ್
ಮಾವಿನ ಹಣ್ಣಿನ ರಸ - 1/2 ಕಪ್ (1 ಮಾವಿನ ಹಣ್ಣಿನ ರಸ)
ಗೋಡಂಬಿ - ಸ್ವಲ್ಪ 
ಉಪ್ಪು - 1 ಚಿಟಿಕೆ

ಮಾಡುವ ವಿಧಾನ : 
ಮೊದಲು ಮಾವಿನ ಹಣ್ಣಿನ ಹೋಳು ಮಾಡಿ ಮಿಕ್ಸಿ ಜಾರ್ ಗೆ ಹಾಕಿ ರಸ ಮಾಡಿಕೊಳ್ಳಬೇಕು.
ಒಂದು ಬಾಣಲೆಯಲ್ಲಿಚಿರೋಟಿ ರವಾ ಹಾಕಿ ತುಪ್ಪ ಸೇರಿಸಿ ಕೆಂಪಗಾಗಿ ಒಳ್ಳೆಯ ಘಮ ಬಿಡುವವರೆಗೆ ಹುರಿದುಕೊಳ್ಳಬೇಕು.
ಒಂದು ಚಿಟಿಕೆ ಉಪ್ಪು ಮತ್ತು ಗೋಡಂಬಿ ಚೂರುಗಳನ್ನು ಸೇರಿಸಬೇಕು.
ನಂತರ ಬಿಸಿ ನೀರು ಸೇರಿಸಿ ಕೈಯಾಡಿಸಿ ಸರಿಯಾಗಿ ಬೇಯಿಸಿಕೊಂಡು ಸಕ್ಕರೆ ಸೇರಿಸಬೇಕು.
ತಳ ಬಿಡುವವರೆಗೆ ಕೈಯಾಡಿಸಿ ಗ್ಯಾಸ್ ಆಫ್ ಮಾಡಿದರೆ ಮಾವಿನ ಹಣ್ಣಿನ ಶಿರಾ ಸವಿಯಲು ಸಿದ್ಧ.


ದಾಳಿಂಬೆ ಸಿಪ್ಪೆಯ ತಂಬುಳಿ


ಬೇಕಾಗುವ ಸಾಮಗ್ರಿ :
ದಾಳಿಂಬೆ ಸಿಪ್ಪೆ - ಚಿಕ್ಕ ಹಣ್ಣಾದರೆ ಅರ್ಧ ಹಣ್ಣಿನ ಸಿಪ್ಪೆ
ಕಾಯಿತುರಿ - 1/2 ಕಪ್
ಜೀರಿಗೆ - 1 ಚಮಚ + 1 ಚಮಚ 
ಗಾಂಧಾರಿ ಮೆಣಸು (ಜೀರಿಗೆ ಮೆಣಸು) - 1/2
ಮಜ್ಜಿಗೆ - 1/2 ಲೋಟ
ಎಣ್ಣೆ - 1 ಚಮಚ 
ಸಾಸಿವೆ - 1/2 ಚಮಚ 
ಕರಿಬೇವಿನ ಸೊಪ್ಪು - 4/5 ಎಲೆ

ಮಾಡುವ ವಿಧಾನ : 
ದಾಳಿಂಬೆ ಸಿಪ್ಪೆಯನ್ನು ಬೇಯಿಸಿ ನೀರು ಬಸಿದುಕೊಳ್ಳಬೇಕು.
ಕಾಯಿತುರಿಗೆ ದಾಳಿಂಬೆ ಸಿಪ್ಪೆ, ಜೀರಿಗೆ, ಗಾಂಧಾರಿ ಮೆಣಸು ಸೇರಿಸಿ ನುಣ್ಣಗೆ ರುಬ್ಬಬೇಕು.
ಇದಕ್ಕೆ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಕದಡಬೇಕು.
ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಡಬೇಕು.
ಆರೋಗ್ಯಕರವಾದ, ಬೇಸಿಗೆ ಕಾಲಕ್ಕೆ ಹಿತವಾದ ದಾಳಿಂಬೆ ತಂಬುಳಿ ಅನ್ನದ ಜೊತೆಗೆ ಸವಿಯಲು ಸಿದ್ಧ.

ವೇದಾವತಿ ಭಟ್ಟ 
ಮುಂಬೈ

ಕಾಯಿ ಬಿಸ್ಕತ್ (ಕಾಯಿ ಅತ್ರಾಸ)



ಬೇಕಾಗುವ ಸಾಮಗ್ರಿ :
ಕಾಯಿತುರಿ - ಒಂದು ಕಾಯಿಯದ್ದು
ಗೋಧಿ ಹಿಟ್ಟು - ಅಗತ್ಯಕ್ಕೆ ತಕ್ಕಷ್ಟು 
ಸಕ್ಕರೆ - 3/4 ರಿಂದ 1 ಕಪ್
ಉಪ್ಪು - 1/4 ಚಮಚ 
ಎಣ್ಣೆ - ಕರಿಯಲು

ಮಾಡುವ ವಿಧಾನ :
ಕಾಯಿತುರಿಯನ್ನು ಮಿಕ್ಸಿ ಮಾಡಿ ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ ಒಂದು ಗಂಟೆ ನೀರಾಗಲು ಬಿಡಬೇಕು.
ನಂತರ ಇದಕ್ಕೆ ಅಗತ್ಯಕ್ಕೆ ತಕ್ಕಷ್ಟು ಗೋಧಿ ಹಿಟ್ಟು ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿ ಕಲಸಿ ಅರ್ಧ ಗಂಟೆ ಬಿಡಬೇಕು.
ನಂತರ ಎಣ್ಣೆ ಸವರಿದ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಕವರ್ ನ ಮೇಲೆ ಅತ್ರಾಸದಂತೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆದರೆ ಬಿಸ್ಕತ್ ರೆಡಿ.

ವೇದಾವತಿ ಭಟ್ಟ 
ಮುಂಬೈ



ಸ್ಟ್ರಾಬೆರ್ರಿ ಮಿಲ್ಕ್ ಶೇಕ್


ಬೇಕಾಗುವ ಸಾಮಗ್ರಿ :
ತಣ್ಣನೆಯ ಹಾಲು - 1 ಕಪ್
ಸ್ಟ್ರಾಬೆರ್ರಿ - 5/6
ಸಕ್ಕರೆ - 3 ಚಮಚ

ಮಾಡುವ ವಿಧಾನ :
ಮೊದಲು ಮಿಕ್ಸಿ ಜಾರ್ ಗೆ ಸ್ಟ್ರಾಬೆರ್ರಿ ಮತ್ತು ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ತಣ್ಣನೆಯ ಹಾಲಿಗೆ ಈ ಮಿಶ್ರಣ ಸೇರಿಸಬೇಕು. ದಪ್ಪ ಎನಿಸಿದರೆ ನೀರು, ಸಿಹಿ ಬೇಕಾದರೆ ಸಕ್ಕರೆ ಸೇರಿಸಬೇಕು. 
(1/2 ಗ್ಲಾಸ್ ನೀರು ಸೇರಿಸಿದ್ದೇನೆ)
ಗ್ಲಾಸ್ ಗೆ ಹಾಕಿ ಸ್ಟ್ರಾಬೆರ್ರಿಯಿಂದ ಬೇಕಾದರೆ ಅಲಂಕರಿಸಿದರೆ ತಣ್ಣನೆಯ ಮಿಲ್ಕ್ ಶೇಕ್ ರೆಡಿ.

ವೇದಾವತಿ ಭಟ್ಟ 
ಮುಂಬೈ

ಗುರುವಾರ, ಜೂನ್ 15, 2023

ಹುಳಿ ಮಾವಿನ ಹಣ್ಣಿನ ನೀರ್ಗೊಜ್ಜು


ಬೇಕಾಗುವ ಸಾಮಗ್ರಿ : 
ಹುಳಿ ಮಾವಿನ ಹಣ್ಣು - 4 
ಬೆಲ್ಲ - 2/3 ಸೌಟು (ಹುಳಿ ಇದ್ದರೆ ಹೆಚ್ಚು ಬೆಲ್ಲ ಹಾಕಬಹುದು)
ಕೊಬ್ಬರಿ ಎಣ್ಣೆ - 3 ಚಮಚ
ಬೆಳ್ಳುಳ್ಳಿ - 6/7 ಎಸಳು
ಸಾಸಿವೆ ಕಾಳು - 1 ಚಮಚ 
ಬ್ಯಾಡಗಿ ಮೆಣಸಿನ ಕಾಯಿ - 3/4
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ : 
ಮಾವಿನ ಹಣ್ಣಿನ ಸಿಪ್ಪೆ ಸುಲಿದು ತೆಗೆದು ಗೊರಟೆ ಸಮೇತ ಒಂದು ಪಾತ್ರೆಗೆ ಹಾಕಬೇಕು.
ಇದಕ್ಕೆ ಉಪ್ಪ ಮತ್ತು ಬೆಲ್ಲ ಸೇರಿಸಿ ಕಿವುಚಿಕೊಳ್ಳಬೇಕು.
(ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಬಹುದು)
ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಕಾಳು, ಬ್ಯಾಡಗಿ ಮೆಣಸಿನ ಕಾಯಿ, ಜಜ್ಜಿದ ಬೆಳ್ಳುಳ್ಳಿ ಎಸಳು ಸೇರಿಸಿ ಸಣ್ಣ ಉರಿಯಲ್ಲಿ ಹುರಿದು ಮೇಲೆ ಸಿದ್ಧ ಪಡಿಸಿದ ಮಿಶ್ರಣಕ್ಕೆ ಸೇರಿಸಬೇಕು.
ಹುಳಿ ಸಿಹಿಯಾದ ನೀರ್ಗೊಜ್ಜು ಅನ್ನದ ಜೊತೆ ಸವಿಯಲು ಸಿದ್ಧ.