ಮಂಗಳವಾರ, ಅಕ್ಟೋಬರ್ 19, 2021

ಗೋವೆಕಾಯಿ ಕಡಬು

ಗೋವೆಕಾಯಿ (ಸಿಹಿಗುಂಬಳ) ಕಡಬು

ಸಾಂಪ್ರದಾಯಿಕ ತಿನಿಸು

ಹವ್ಯಕರ ಬಹಳ ಪ್ರಸಿದ್ಧ ತಿನಿಸು. ಈ ಕಡಬು ತಯಾರಿಸಲು ನಮ್ಮ ಮಲೆನಾಡಿನಲ್ಲಿ ವಿಶೇಷವಾದ ಬಾಳೆ ಸಿಗುತ್ತದೆ. ಇದಕ್ಕೆ ಗಂಟಲೆ ಕೀಳೆ ಎನ್ನುತ್ತಾರೆ. ಅರಿಶಿಣದ ಎಲೆಯನ್ನು ಬಳಸುತ್ತಾರೆ. ಇಲ್ಲವಾದಲ್ಲಿ ಬಾಳೆ ಎಲೆಯಲ್ಲೂ ಮಾಡಬಹುದು. ಅರಿಶಿಣದ ಎಲೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ನಾನು ನನ್ನ ಪೋಟ್ ನಲ್ಲಿ ಬೆಳೆದ ಅರಿಶಿಣದ ಎಲೆ ಬಳಸಿ ಕಡಬು ಮಾಡಿದ್ದೇನೆ.

ಬೇಕಾಗುವ ಸಾಮಗ್ರಿ :
ಗೋವೆಕಾಯಿ - 1/4 ಭಾಗ
(ಮಧ್ಯಮ ಗಾತ್ರದ ಗೋವೆಕಾಯಿಯ ಕಾಲುಭಾಗ)
ಅಕ್ಕಿ - 1 ಕಪ್
ಬೆಲ್ಲ - 1/2 ಕಪ್
ಉಪ್ಪು - 1/4 ಚಮಚ
ಅರಿಶಿಣದ ಎಲೆ - 6/8
ಇಲ್ಲವಾದಲ್ಲಿ ಬಾಳೆ ಎಲೆಯನ್ನು ಬಳಸಬಹುದು

ಮಾಡುವ ವಿಧಾನ :
ಗೋವೆಕಾಯಿಯನ್ನು ಕತ್ತರಿಸಿ ಸಿಪ್ಪೆ ತೆಗೆದು ತುರಿದು ಬೆಲ್ಲ ಹಾಕಿ ಬೇಯಿಸಬೇಕು.
ಅಕ್ಕಿಯನ್ನು ಎಂಟರಿಂದ ಹತ್ತು ಗಂಟೆಗಳ ಕಾಲ ನೆನೆಯಿಸಬೇಕು. ನಂತರ ಅದನ್ನು ಜಾಸ್ತಿ ನೀರು ಹಾಕದೇ ನುಣ್ಣಗೆ ರುಬ್ಬಿಕೊಳ್ಳಬೇಕು.
ಇದನ್ನು ಗೋವೆಕಾಯಿಯ ಮಿಶ್ರಣಕ್ಕೆ ಸೇರಿಸ ಚೆನ್ನಾಗಿ ಕೈಯಾಡಿಸಿ ಮಿಶ್ರ ಮಾಡಬೇಕು.
ಬಹಳ ತೆಳು ಅನಿಸಿದರೆ ಸ್ವಲ್ಪ ಗಟ್ಟಿಯಾಗಲು ಒಲೆಯ ಮೇಲಿಟ್ಟು ಕೈಯಾಡಿಸಬೇಕು.
ತಣ್ಣಗಾದ ನಂತರ ಅರಿಶಿಣ ಎಲೆಯ ಹಿಂಬದಿಯಲ್ಲಿ ಹಚ್ಚಿ ನಾಲ್ಕು ಬದಿಯಲ್ಲಿ ಮಡಚಬೇಕು.
ಇದನ್ನು ಇಡ್ಲಿ ಪಾತ್ರೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಬೇಕು.
ತುಪ್ಪದೊಂದಿಗೆ ಸವಿಯಲು ಕಡಬು ಸಿದ್ಧ.

ವೇದಾವತಿ ಭಟ್ಟ
ಮುಂಬೈ 

ಶುಕ್ರವಾರ, ಅಕ್ಟೋಬರ್ 1, 2021

ಎಲವರಿಗೆ_ತಂಬುಳಿ



ಬೇಕಾಗುವ ಸಾಮಗ್ರಿ :
ಎಲವರಿಗೆ ಸೊಪ್ಪು - 1 ಹಿಡಿ (ಮುಷ್ಠಿ)
ಜೀರಿಗೆ - 1 ಚಮಚ
ಕಾಳು ಮೆಣಸು - 10/12
ಉಪ್ಪು - ರುಚಿಗೆ ತಕ್ಕಷ್ಟು
ಮಜ್ಜಿಗೆ - 1 ಲೋಟ
ಕೊಬ್ಬರಿ ಎಣ್ಣೆ - 2 ಚಮಚ
ಕಾಯಿ ತುರಿ - 1/4 ಕಪ್

ಮಾಡುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಹಾಕಿ ಸೊಪ್ಪನ್ನು ಸ್ವಚ್ಛಗೊಳಿಸಿ ಟಿಸಿಲಿನಿಂದ ಬೇರ್ಪಡಿಸಿ ಹಾಕಿ ಚೆನ್ನಾಗಿ ಹುರಿಯಬೇಕು.
ಇದಕ್ಕೆ ಕಾಳು ಮೆಣಸು ಮತ್ತು ಜೀರಿಗೆ ಸೇರಿಸಿ ಹುರಿಯಬೇಕು.
ಇದಕ್ಕೆ ಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಸೋಸಿದ ಮಿಶ್ರಣ ಮತ್ತು ರುಬ್ಬಿದ ಮಿಶ್ರಣಕ್ಕೆ ಬೆಲ್ಲ, ಉಪ್ಪು ಮತ್ತು ಮಜ್ಜಿಗೆ ಸೇರಿಸಬೇಕು.
ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದರೆ ಆರೋಗ್ಯಕರವಾದ ಮತ್ತು ರುಚಿಯಾದ ಎಲವರಿಗೆ ತಂಬುಳಿ ಸಿದ್ಧ.

ವೇದಾವತಿ ಭಟ್ಟ
ಮುಂಬೈ